ವಿಷಯದ ವಿವರಗಳಿಗೆ ದಾಟಿರಿ

ತಾಳಲಾರೆ!

ಏಪ್ರಿಲ್ 27, 2010

ವಾಕ್ಯವೊಂದನ್ನು

ಎಗ್ಗಾಮುಗ್ಗಾ

ಹರಿದು

ಪದಗಳನ್ನೆಲ್ಲಾ

ಎಲ್ಲೆಲ್ಲೋ

ಮುರಿದು

ಕರ್ಕಶವಾಗಿಸಿ

ಒಂದರ

ಕೆಳಗೆ

ಒಂದು

ಪದ

ಜೋಡಿಸಿ

ಅರ್ಥವಿಲ್ಲದೆ

ಬರೆ

ದದ್ದು

ಘನವಾದ

ಪದ್ಯ

ವಂತೆ.

ಕಾಪಾಡಿ!

…..

ಏಪ್ರಿಲ್ 21, 2010

ಸ್ವಾಮಿ ವಿವೇಕಾನಂದರ ಜನ್ಮದಿನ

ಜನವರಿ 12, 2010

ಇವತ್ತು, ಜನವರಿ ೧೨, ಸ್ವಾಮಿ ವಿವೆೇಕಾನಂದರ ಜನ್ಮದಿನ. ಸಾಕಷ್ಟು ಮಂದಿಗೆ ತಿಳಿದಿರಲಾರದು, ಏಕಂದ್ರೆ ಇವರು ರಾಜಕೀಯ ನಾಯಕರೋ, ಒಂದು ಜಾತಿ-ಪಂಗಡದ ಮುಖಂಡರೋ ಆಗಿರಲಿಲ್ಲ ನೋಡಿ! ಅದರಲ್ಲೂ ನಮ್ಮ pseudo-secular ಬುದ್ಧಿಜೀವಿಗಳಿಗೂ, ತಮ್ಮ ಭಾರತೀಯತೆಯಲ್ಲಾಗಲೀ, ಸನಾತನ ಧರ್ಮದಲ್ಲಾಗಲೀ ಅಭಿಮಾನ ಹಾಗಿರಲಿ, ತಾತ್ಸಾರವನ್ನು ಬೆಳೆಸಿಕೊಂಡು  ಹೆಮ್ಮೆ ಪಡುವ ನಮ್ಮ ಅಸಂಖ್ಯಾತ ನಗರಜೀವಿಗಳಿಗೂ, ಪತ್ರಿಕೆಗಳಿಗೂ ವಿವೇಕಾನಂದರು ಬೇಕಿಲ್ಲ.

ವಿವೇಕಾನಂದರೆಂದರೆ ಯಾರು ಎಂದು ಕೇಳುವ ದಿನ ದೂರ ಇಲ್ಲ.

Valentines Day ನಮ್ಮ ಅತ್ಯಂತ ದೊಡ್ಡ ‘ನಾಡಹಬ್ಬ’ ಆಗುತ್ತಿರುವ ಕಾಲ ಇದು.

ಇರಲಿ. ವಿವೇಕಾನಂದರಂತಹ ಮಹಾಪುರುಷರ ಬಗ್ಗೆ ಗೌರವವುಳ್ಳವರಲ್ಲಿ ನೀವೂ ಒಬ್ಬರೆಂದು ನಾನು ಭಾವಿಸಿರುವುದರಿಂದ —

ನಿಮಗೆ ವಿವೇಕಾನಂದರ ಜನ್ಮದಿನದ ಶುಭಾಶಯಗಳು!

* * * * *

ವಿವೇಕಾನಂದರ ಜನ್ಮದಿನ ಬಂದಾಗಲೆಲ್ಲಾ ಒಂದು ಹಳೆಯ ಘಟನೆ ನೆನಪಿಗೆ ಬರತ್ತೆ. ಆಗ ನಾನು ಬಿ.ಇ. ಮೂರನೇ ವರ್ಷದಲ್ಲಿದ್ದೆ. ಕಾಲೇಜಿನಲ್ಲಿ ವಿವೇಕಾನಂದರ ಜನ್ಮದಿನ ಆಚರಿಸಬೇಕೆಂಬ ಆಸೆ ಇತ್ತು. ಕೆಲವು ಮಿತ್ರರನ್ನು ಸೇರಿಸಿಕೊಂಡು ಪ್ಲಾನ್ ಹಾಕಿದ್ದಾಯ್ತು. ಪುಟ್ಟ ಕಾರ್ಯಕ್ರಮ ಅಷ್ಟೆ. ಪಟದ ಮುಂದೆ ಜ್ಯೋತಿ ಬೆಳಗಿಸಿ, ವಿವೆೇಕಾನಂದರ ಬಗ್ಗೆ ಒಂದೆರಡು ಮಾತಾಡಿ ದೇಶದ ಏಳಿಗೆಯ ವಿಷಯದಲ್ಲಿ ವಿದ್ಯಾರ್ಥಿಗಳ ಮತ್ತು ಯುವಕರ ಕರ್ತವ್ಯದ ಕುರಿತು ವಿವೇಕಾನಂದರ ಮಾತುಗಳನ್ನು ಸ್ಮರಿಸುವುದು — ಇದು ನಮ್ಮ ಉದ್ದೇಶ. ದೇಶದ ಬಗ್ಗೆ ಇವರ್ಯಾರೂ ತಲೆ ಕೆಡಸಿಕೊಳ್ಳುವುದೇ ಇಲ್ಲವಲ್ಲ ಅನ್ನುವ ಸಿಟ್ಟು-ಕಾಳಜಿಗಳಿಂದ ಹುಟ್ಟಿದ್ದು ಈ ಪ್ಲಾನು. ಸರಿ, ಪ್ರಿನ್ಸಿಪಾಲರನ್ನು ಒಂದು ಮಾತು ಕೇಳಿ, ಅವರು ಓಕೆ ಅಂದಮೇಲೆ ಶುರು ಆಯ್ತು ನಮ್ಮ ಕೆಲಸ. ಪಾಂಪ್ಲೆಟ್ ಪ್ರಿಂಟ್ ಹಾಕಿಸಿ ಎಲ್ಲ ಕಡೆ ಹಂಚಿದ್ದೂ ಆಯ್ತು, ಮಾರಾಟಕ್ಕಾಗಿ ವಿವೇಕಾನಂದರ ಕೆಲವು ಪುಸ್ತಕಗಳನ್ನು ತರಿಸಿದ್ದೂ ಆಯ್ತು.

೧೨ ರ ಬೆಳಗ್ಗೆ ಪ್ರಿನ್ಸಿಪಾಲರು ಹೇಳಿಕಳಿಸಿದರು. ಕಾರ್ಯಕ್ರಮ ನಡೆಸಲು ಅನುಮತಿ ಕೊಡಲ್ಲ, ನಡೆಸಿದರೆ disciplinary action ತೆಗೆದುಕೊಳ್ಳಬೇಕಾಗತ್ತೆ ಅಂತ. ಏನ್ಸಾರ್ ಇಷ್ಟುದಿನ ಸುಮ್ನಿದ್ದು ಈಗ ಹೀಗಂತೀರಿ ಅಂತ ಬೇಡಿದರೂ, ಕೂಗಾಡಿದರೂ ಏನೂ ಪ್ರಯೋಜನ ಆಗಲಿಲ್ಲ. ಕಡೆಗೆ ಗೊತ್ತಾಯ್ತು, ಕಾಲೇಜಿನ ಪ್ರೆಸಿಡೆಂಟ್ (ಆಗಿನ ಕಾಂಗ್ರೆಸ್ ಎಂ.ಎಲ್.ಏ.) ಕಡೆಯಿಂದ ಬಂದ ಹುಕುಂ ಇದು ಅಂತ.

ಸರಿ, ಕಾರ್ಯಕ್ರಮ ಮಾಡಲು ಕೊಟ್ಟಿದ್ದ ಜಾಗ ನಮಗೆ ಸಿಗಲಿಲ್ಲ. ಕಾರ್ಯಕ್ರಮ ನಡೆಯಲಿಲ್ಲ.

ಜಾಗದಲಲ್ಲಿ ನಡೆಯಲಿಲ್ಲ ಅಷ್ಟೆ. ನಾವೊಂದಷ್ಟು ಜನ ಹೋಗಿ ಪಕ್ಕದ ಮೈದಾನದಲ್ಲಿ ನಡೆಸಿಕೊಂಡು ಖುಶಿ ಪಟ್ವಿ. ಒಂದಿಬ್ಬರು ಲೆಕ್ಚರರ್ಸ್ ಕೂಡಾ ಬಂದ್ರು. ನಂತರ ಪ್ರಿನ್ಸಿಪಾಲರ ಹತ್ರ ಹೋಗಿ ನಾಲ್ಕೈದು ಪುಸ್ತಕ ಅವರಿಗೆ ಗಂಟುಹಾಕಿ ಬಂದೆ. 🙂

ಈ ಮತ್ತು ಈ ರೀತಿಯ ಇನ್ನೆಷ್ಟೋ ಸಾಹಸಗಳಲ್ಲಿ ನನ್ನ “partner in crime in every single way” ಆಗಿದ್ದ, ನನ್ನ ಸಹಪಾಠಿಯಲ್ಲದ ನನ್ನ ಪ್ರೀತಿಯ ಮಿತ್ರನ ನೆನಪಾಗತ್ತೆ. ಈಗಿಲ್ಲದ ಆ ಮಿತ್ರನ ಬಗ್ಗೆ ಮತ್ಯಾವಾಗಲಾದರೂ ಬರೀತೀನಿ.

ಎಲ್ಲಾ ಓಕೆ, ಶಿಕಾಗೋ ಯಾಕೆ?

ಡಿಸೆಂಬರ್ 23, 2009

ಹೊಸ ಕವಲು

ಡಿಸೆಂಬರ್ 19, 2009

೨೦೦೫-ರಲ್ಲಿ ಹುಟ್ಟಿ ಆಗಾಗ ಚಟುವಟಿಕೆ ಕಾಣುತ್ತಿದ್ದ ನನ್ನ ಬ್ಲಾಗ್ Sand And Foam ಒಂದು ರೀತಿ ಕಲಸುಮೇಲೋಗರ ಆಗೋಗಿತ್ತು. ನನಗಲ್ಲ– ಆಗಾಗ ಅಪ್ಪಿತಪ್ಪಿ ನನ್ನ ಬ್ಲಾಗಿಗೆ ಬಂದವರಿಗೆ. ಯಾಕಂದ್ರೆ, ಅದರಲ್ಲಿ ನಾನು ಹೆಚ್ಚುಬರೆದದ್ದು ಇಂಗ್ಲಿಷಿನಲ್ಲೇ ಆದರೂ ನಾನು ಆಡುವ ಭಾಷೆಗಳಾದ ಕನ್ನಡ, ತೆಲುಗು, ಮರಾಠಿಗಳಲ್ಲೂ (ಅಥವ ಆ ಭಾಷೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ) ಆಗಾಗ ನಾನು ಬರೆದದ್ದುಂಟು. ಅದರಲ್ಲಿ ಹಾಡುಗಳೂ ಇವೆ, ಪುಸ್ತಕಗಳ ಬಗ್ಗೆಯೂ ಇವೆ, ಭಾರತೀಯ ಸಂಸ್ಕೃತಿ, current affairs, politics, US affairs ಇವುಗಳ ಬಗೆಗಿನ ನನ್ನ ತಲೆಹರಟೆ ಸಹ ಇವೆ. ಅದರ ಜೊತೆಗೆ ನನ್ನ ಹುಚ್ಚುಗಳಲ್ಲಿ ಒಂದಾದ photography ಕೂಡಾ ಅದರಲ್ಲಿ ನುಸುಳಿ ಇದು ಇಂತಹ ಬ್ಲಾಗ್ ಎಂದು categorize ಮಾಡಲು ಸಾಧ್ಯವಿಲ್ಲದಂತೆ ಆಗಿತ್ತು.

ಅದು ಸರಿ ಕೂಡ! ಯಾಕಂದ್ರೆ ನಮ್ಮನ್ನು ನಾವು ಒಂದೇ ರೀತಿ classify ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಲವಾರು ತಿಕ್ಕಲುತನಗಳ ಸಂಮಿಶ್ರ ರೂಪಗಳೇ ನಾವು ಪ್ರತಿಯೊಬ್ಬರೂ! ಹಾಗಾಗಿ ಅದನ್ನು ತಿದ್ದುವ ಅವಶ್ಯಕತೆಯಾಗಲೀ ಆಸೆಯಾಗಲೀ ನನಗೆ ಬಂದೇ ಇರಲಿಲ್ಲ.

ಆದರೆ ಇತ್ತೀಚೆಗೆ ಒಂದು ವಿಷಯ ನನ್ನ ಗಮನಕ್ಕೆ ಬರ್ತಿತ್ತು. ಯಾರಾದರೂ ಎಲ್ಲಿಂದಲಾದರೂ ನನ್ನ ಬ್ಲಾಗನ್ನು ಹೊಕ್ಕರೆ ಅವರಿಗೆ ಕಾಣುತ್ತಿದ್ದ ಮೊದಲ ಪುಟದಲ್ಲಿನ ವಿಷಯಗಳನ್ನು ನೋಡಿ ಅದರ ಆಧಾರದ ಮೇಲೆ ಇದು ಇಂಥ ಬ್ಲಾಗ್  ಎಂದು ನಿರ್ಧರಿಸಿಬಿಟ್ಟು ಬ್ಲಾಗನ್ನು ಕೆದಕಿ ನೋಡುವ ಪ್ರಮೇಯಕ್ಕೂ ಹೋಗ್ತಿರಲಿಲ್ಲ.

ಅದರ ಜೊತೆಗೆ, ಸುಮಾರು ವರ್ಷಗಳಿಂದ ಅಮೇರಿಕಾದಲ್ಲಿದ್ದು ಕನ್ನಡದಲ್ಲಿ ಮಾತನಾಡುವ/ಬರೆಯುವ ಅಭ್ಯಾಸ ಕಳೆದುಕೊಳ್ಳುತ್ತಿರುವ ನನಗೆ ಪ್ರತಿ ಬ್ಲಾಗ್ಪೋಸ್ಟನ್ನೂ ಇಂಗ್ಲಿಷಿನಲ್ಲೇ ಬರೆಯುವ ಚಟದಿಂದ ಆಚೆ ಬಂದು ಆಗಾಗ ಕನ್ನಡದಲ್ಲೂ ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಿತ್ತು.

ಯಾರಾದರೂ ಓದಲಿ ಬಿಡಲಿ, ಬರೆಯುವ ಅಭ್ಯಾಸವನ್ನಾದರೂ ನಾನು ಉಳಿಸಿಕೊಳ್ಳಲೇಬೇಕಾದ ತುರ್ತು ಈಗ ನನಗಿರುವುದರಿಂದ, Sand And Foam ಕವಲೊಡೆದಿದೆ. ಅಲ್ಲಿ ಬರೆದಿದ್ದ ಕನ್ನಡ ಪೋಸ್ಟಗಳನ್ನೂ ಎತ್ತಿ ಇಲ್ಲಿ ಹಾಕ್ತಿದೀನಿ.

ಹೀಗೊಂದು ಮಾತು…

ಸೆಪ್ಟೆಂಬರ್ 15, 2009

ಇವತ್ತು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನ ಅನ್ನೋದು ಎಷ್ಟು ಮಂದಿಗೆ ಗೊತ್ತಿದೆಯೋ ಗೊತ್ತಿಲ್ಲ. ಇವತ್ತು ಬೆಳಗ್ಗೆ ನನಗೆ ನೆನಪಾದಾಗ ಏನಾದ್ರೂ ಬರೀಬೇಕು ಅಂತ ಅನ್ನಿಸಿತಾದರೂ ಏನು ಬರೀಬೇಕು ಅಂತ ಮಾತ್ರ ತಕ್ಷಣ ತೋಚಲಿಲ್ಲ. ನಾನು ಅವರ ಬಗೆಗಿನ ಪುಸ್ತಕಗಳನ್ನು ಒಂದಷ್ಟು ಓದಿದ್ದೀನಾದರೂ ಅವರೇ ಬರೆದ ಪುಸ್ತಕಗಳನ್ನು ಅಷ್ಟಾಗಿ ಓದಿಲ್ಲ. ಕೆಲಸದ ಮಧ್ಯೆ ಆಗಾಗ ಯೋಚನೆ ಮಾಡ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ವಿಷಯ ನೆನಪಾಯ್ತು. ಅದು ಇತ್ತೀಚೆಗೆ ಬಹುಮುಖ ‘ಮೇಧಾವಿಗಳ’ ಮೇಳವಾಗಿರುವ ನಮ್ಮ (ಭಾರತದ) ಕೇಂದ್ರ ಸರಕಾರದಲ್ಲಿರುವ ಒಬ್ಬ ಮಹಾನ್ ಮಂತ್ರಿಯೊಬ್ಬರ ಪ್ರಚಂಡ ತಲೆಯಿಂದ ಉತ್ತೇಜಿತವಾದ ನೆನಪು.

ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾದ ಮೇಲೆ ಮಾಡಿದ ಮೊದಲನೆ ಮುಖ್ಯ ಕೆಲಸ ಅಂದರೆ Economic Conference ಎಂಬ ಸಂಪದ್ವಿಷಯಕ ಸಂಸತ್ತಿನ ಸ್ಥಾಪನೆ. ಅದರಲ್ಲಿ ಮೂರು ಶಾಖೆಗಳಿದ್ವು: ಯಂತ್ರಪರಿಶ್ರಮ ಮತ್ತು ವಾಣಿಜ್ಯ; ವಿದ್ಯಾವಿಷಯ; ಭೂವ್ಯವಸಾಯ. ಈ ಮೂರೂ ಶಾಖೆಗಳಿಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ಮುಖ್ಯ ಅಧಿಕಾರಿಗಳೂ, ವಿಶೇಷ ಶಾಸ್ತ್ರಜ್ಞರೂ, ಅವರೂ-ಇವರೂ ಸದಸ್ಯರಾಗಿದ್ದರು. ಎಲ್ಲರೂ ತಲೆ ಇದ್ದವರೇ. ಈ ಸಮಿತಿಗಳ ಮೂಲಕ ಮೈಸೂರು ಸಂಸ್ಥಾನದಲ್ಲಿ ಕೆಲವಷ್ಟು radical developments ತರಬೇಕು ಅನ್ನುವ ಕನಸನ್ನು ಕಂಡ ವಿಶ್ವೇಶ್ವರಯ್ಯನವರು ಮಾತ್ರ ಕುಚೋದ್ಯಕ್ಕೆ ಗುರಿಯಾಗಿಬಿಟ್ಟರು — ಈ ಸಮಿತಿಗಳ ಮೇಧಾವಿಗಳಿಂದಾಗಿ (ಮತ್ತು ಕಳ್ಳರಿಂದಾಗಿ — ಆಗಿನ ಕಾಲದಲ್ಲಿ ಸರಕಾರಿ ಕಛೇರಿಗಳು ಶುದ್ಧವಾಗಿದ್ವು ಅಂತ ಯಾರಿಗಾದ್ರೂ ಭ್ರಮೆ ಇದ್ರೆ ಆ Economic conference-ನ ಕಾರ್ಯಪದ್ಧತಿಗಳನ್ನು ಓದಿನೋಡಿ ಭ್ರಮೆಯಿಂದ ವಿಮುಕ್ತರಾಗಿ!).

ಈ ಸಮಿತಿಗಳ ಮೇಧಾವಿಗಳಿಂದ ಬಂದ ಅಭಿವೃದ್ಧಿ ಕಾರ್ಯಕ್ರಮಗಳ proposals-ಗಳಲ್ಲಿ ಬಂದ ಒಂದು ಸಲಹೆ ಹೀಗೆ:

“ಮಲೆನಾಡು ಪ್ರಾಂತದ ಕಾಡುಗಳಲ್ಲಿ ಹುಲ್ಲು ಆಳಾಳುದ್ದ ಬೆಳೆದಿರುತ್ತದೆ. ಒಂದು ನೂರು ಜನ ಕುಯ್ಯುವ ಆಳುಗಳನ್ನು ಗೊತ್ತುಮಾಡಿ, ಅವರು ಪ್ರತಿದಿನವೂ ಈ ಹುಲ್ಲನ್ನು ಕೊಯ್ದು ಪಿಂಡಿಪಿಂಡಿಗಳಾಗಿ ಕಟ್ಟಿ ಆ ಪಿಂಡಿಗಳನ್ನು ಬೇಲುಗಳನ್ನಾಗಿ ಜೋಡಿಸಿ ಆ ಬೇಲುಗಳಿಗೆ ಭದ್ರವಾದ ಕಬ್ಬಿಣದ ಪಟ್ಟಿಗಳನ್ನು ಕಟ್ಟಿ, ಇಂಥ ನೂರಿನ್ನೂರು ಬೇಲುಗಳು ಸಿದ್ಧವಾದಾಗ ಅವನ್ನು ಬಾಬಾಬುಡನ್ ಬೆಟ್ಟದ ಪಶ್ಚಿಮದಿಕ್ಕಿನ ಇಳಿಜಾರಿನಲ್ಲಿ ವರಸೆವರಸೆಯಾಗಿ ಜೋಡಿಸಿ ಅಲ್ಲಿಂದ ಬಲವಾಗಿ ಒದ್ದು ಉರುಳಿಸತಕ್ಕದ್ದು. ಆಗ ಹುಲ್ಲಿನ ಬೇಲುಗಳು ತಾವಾಗಿ, ಯಾವ ಖರ್ಚೂ ಇಲ್ಲದೆ, ಉರುಳುರುಳಿಕೊಂಡು ಸಮುದ್ರತೀರವನ್ನು ಸೇರುತ್ತವೆ. ಅಲ್ಲಿಂದ ಹುಲ್ಲನ್ನು ದೋಣಿಗಳ ಮೇಲೆ ವ್ಯಾಪಾರಸ್ಥಾನಗಳಿಗೆ ಸಾಗಿಸತಕ್ಕದ್ದು.”

ಇನ್ನೊಂದು ಸಲಹೆ:

“ಬೆಂಗಳೂರಿನಲ್ಲಿ ನಾಟಕಶಾಲೆಗಳು ನಾಲ್ಕಾರಿವೆ. ಒಂದೊಂದರಲ್ಲಿಯೂ ಸಾವಿರ-ಸಾವಿರ ಜನ ಸೇರುತ್ತಾರೆ. ಆ ನಾಟಕಶಾಲೆಗಳ ಸಮೀಪದಲ್ಲಿ ನಾಲ್ಕೈದು ಬೇರೆಬೇರೆ ತೊಟ್ಟಿಗಳನ್ನು ಕಟ್ಟಿಸಿ ಅವುಗಳಲ್ಲಿ ಮೂತ್ರಸಂಗ್ರಹ ಮಾಡಿ ಅದರಿಂದ ಅಮೋನಿಯಂ ಸಲ್ಫೇಟ್ ತಯಾರಿಸಬಹುದು.”

ಇದೆೇ ರೀತಿಯ ಸಲಹೆಗಳಿಗೆ ಕೊರತೆಯಿಲ್ಲದೆ ಇಕನಾಮಿಕ್ ಕಾನ್ಫರೆನ್ಸ್ ನಗೆಪಲಾಯ್ತಂತೆ.

ಇಂಥವರನ್ನು ಕಟ್ಟಿಕೊಂಡಿದ್ರೂ ಸಹ ಭದ್ರಾವತಿಯ ಉಕ್ಕು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬ್ಯಾಂಕ್ (State Bank of Mysore), ಕೃಷ್ಣರಾಜಸಾಗರ ಜಲಾಶಯ ಇತ್ಯಾದಿಗಳು ಅಸ್ತಿತ್ವಕ್ಕೆ ಬರಲು ಸಾಧ್ಯವಾಗಿದ್ದು ವಿಶ್ವೇಶ್ವರಯ್ಯನವರ ಸಂಕಲ್ಪಶಕ್ತಿ ಮತ್ತು ಕಾರ್ಯದೃಢತೆಗೆ ಸಾಕ್ಷಿ.

ಹಳ್ಳಿಗಳಲ್ಲಿ ಜನಕ್ಕೆ ಸಂಜೆಯ ಹೊತ್ತು ತುಂಬಾ ಸಮಯ ಇದ್ದು ಅದನ್ನು ಹೇಗೆ ಕಳೆಯಬೇಕೆಂದು ಗೊತ್ತಾಗದೆ ಬೆೆೇಗ ಮಲಗುವುದರಿಂದ ಜನಸಂಖ್ಯೆ ಹೆಚ್ಚಾಗ್ತಿದೆ, ಅದನ್ನು ತಡಗಟ್ಟಬೇಕಂದ್ರೆ ಹಳ್ಳಿಹಳ್ಳಿಗಳಿಗೂ ವಿದ್ಯುಚ್ಛತ್ತಿ ಮತ್ತು TV ಸೌಕರ್ಯ ಕೊಟ್ಟು ಜನ ಬೇಗ ಮಲಗದಂತೆ ಮಾಡಬೇಕು ಅನ್ನುವಂಥ ಮಹಾನ್ ಐಡಿಯಾ ಕೊಟ್ಟ ‘ಆರೋಗ್ಯ’ ಮಂತ್ರಿ ಗುಲಾಂ ನಬೀ ಆಝಾದರಂಥವರನ್ನು ಕಟ್ಟಿಕೊಂಡು ಮೇಧಾವಿ ಮ.ಮೋ.ಸಿಂಗ್ ಏನೋ ಕಡೆದು ಕಟ್ಟೆ ಹಾಕ್ತಾರೆ ಅಂತ ನಾವೇನಾದ್ರೂ ಅಂದ್ಕೊಂಡ್ರೆ ಅದು ನಾವು ನಮ್ಮ ಮೇಧಾಶಕ್ತಿಗೆ ಮಾಡಿಕೊಂಡ ಅವಮಾನ.

PS: ನಾನು ಮೇಲೆ ಉದಾಹರಿಸಿದ ವಿಶ್ವೇಶ್ವರಯ್ಯನವರಿಗೆ ಸಂಬಂಧಪಟ್ಟ ಘಟನೆಗಳ ಮೂಲ: ಡಿ.ವಿ.ಜಿ. ಕೃತಿಶ್ರೇಣಿಯ “ನೆನಪಿನ ಚಿತ್ರಗಳು”.

ಅಳಿವು-ಉಳಿವು

ಜುಲೈ 31, 2009

ಉಳಿವಿನಾಳಕೆ ಹೊಕ್ಕಿ ಅಳಿಯದೆ

ಉಕ್ಕೇರುವ ಅಕ್ಕರೆಗೆ

ಲೆಕ್ಕವಿಲ್ಲದೆ ಬಿಕ್ಕುವ ನಾನು ಏನು ಹೇಳಲಿ ನಿನಗೆ?

ಹುಸಿಯೆನ್ನಲೇ, ಹಸಿ ಹಸಿಯಾದ ಪ್ರೀತಿಯೆನ್ನಲೇ,

ಹೊಸ ಒಸಗೆಯೆನ್ನಲೇ?

ಹಸಿದು ಪ್ರೀತಿಗೆ ಹೊಸೆಹೊಸೆದು ನೋಡಿದ

ಚಿತ್ತಾರಗಳನು ಭ್ರಮಿಸಿ ರಮಿಸಿದ ನಾನು

ಮತ್ತಿಲ್ಲವೇ, ಮತ್ತೇರಿಸುವ ಮೆತ್ತನೆಯ ಮಾತಿಲ್ಲವೇ

ನೆನಪುಗಳ ಎತ್ತೊಗೆಯಲಾರದೆ

ಶಪಿಸದೆ ತಪಿಸಿದೆ, ಕುಸಿದು ಕುಪ್ಪೆಯಾದೆ

ಎತ್ತಲಾರೆಯೇ ಬಂದು ಇತ್ತ ನಿಲ್ಲಲಾರೆಯೇ ನೀನು

ಇರಲಿ ಬಿಡು, ನಿನಗೀಗ ಬೇರೊಂದು ಹೆಗಲು

ಬೇಡ ಬಿಡು ನಿನಗೆ ದಿಗಿಲು — ನನ್ನ

ಹಗಲಿನಲಿ ನೆರಳಿಲ್ಲ ಇರುಳಿನಲಿ ಕನಸಿಲ್ಲ

ಹೇಳು, ಅಳಿವು-ಉಳಿವುಗಳಂತೇಕೆ ನಾನು-ನೀನು?

PS: ಇವತ್ತು ಬರೆದದ್ದಲ್ಲ. ಬರೆದ ದಿನಾಂಕ ಕೂಡಾ ನೆನಪಿಲ್ಲ. ಸುಮ್ನೆ ಇಲ್ಲಿ ಜಾಗ ಖಾಲಿ ಇದೆ ಅಂತ ಇವತ್ತು ಹಾಕಿದ್ದಷ್ಟೆ. ಅಡ್ಜಸ್ಟ್ ಮಾಡ್ಕೊಳಿ.

ಕೆರೆಮನೆ ಶಂಭು ಹೆಗಡೆ ನಿಧನ

ಫೆಬ್ರವರಿ 3, 2009

ಯಕ್ಷಗಾನ ಕ್ಷೇತ್ರದ ಮಹಾನ್ ಕಲಾವಿದರಾಗಿದ್ದು, ಆ ಕಲೆಯ ಬಗ್ಗೆ ಅವರ ಕುಣಿತದಷ್ಟೇ ಅದ್ಭುತವಾಗಿ ಮಾತನಾಡುತ್ತಾ, ಕಲೆಯನ್ನು ಜೀವಂತವಾಗಿ ಉಳಿಸಲು ಶ್ರಮಿಸುತ್ತಾ ಇಡೀ ಜೀವನವನ್ನು ಸವೆಸಿ, ಕಡೆಗೆ ಇವತ್ತು ಕುಣಿಯುತ್ತಲೇ ಕುಸಿದು ಹೊರಟುಹೋದರಂತೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಹಿರಿಯ ಚೇತನ ಶ್ರೀ ಕೆರೆಮನೆ ಶಂಭು ಹೆಗಡೆಯವರು. ಯಕ್ಷಗಾನದಂತಹ ಅದ್ಭುತ ಕಲೆಯ ಬಗ್ಗೆ ಕಿಂಚಿತ್ತಾದರೂ ಆಸಕ್ತಿ ಇದ್ದು ಅದನ್ನು ಆಸ್ವಾದಿಸಿದವರಿಗೆ ಶಂಭು ಹೆಗಡೆಯುವರ ಬಗ್ಗೆ ಆಗಲೀ, ’ಕೆರೆಮನೆ’ ಬಗ್ಗೆ ಆಗಲೀ ಏನೂ ಹೇಳಬೇಕಿಲ್ಲ.

ಹಲವಾರು ವರ್ಷಗಳ ನಂತರ ಶಂಭು ಹೆಗಡೆಯವರ ಯಕ್ಷಗಾನವನ್ನು ತುಂಬಾ ಹತ್ತಿರದಿಂದ ನೋಡಿ ಹೃದಯ ತುಂಬಿಸಿಕೊಳ್ಳುವ ಅದೃಷ್ಟ ನನ್ನದಾಗಿದ್ದು ಅವರು ೨೦೦೬ ನವಂಬರ್‌ನಲ್ಲಿ ಶಿಕಾಗೋಗೆ ಬಂದಾಗ. ಅವರು ಆಡಿದ ’ಜರಾಸಂಧ ವಧೆ’ ಎಂದಿಗೂ ಮರೆಯಲಾಗದ ಅನುಭವವಾಗಿ, ಈಗ ಆ ಅನುಭವಕ್ಕೆ ಮತ್ತಷ್ಟು ವಿಶೇಷ ಸ್ಥಾನ ದೊರಕಿಹೋಗಿದೆ. ಇನ್ನೇನಿದ್ದರೂ ಅವರನ್ನು ಮನಸ್ಸಿನ ಅಥವಾ ದೂರದರ್ಶನದ ತೆರೆಯ ಮೇಲೆ ಮಾತ್ರ ನೋಡಲು ಸಾಧ್ಯ. ಹಾಗಾಗೇ, ಅವರ ಕುಣಿತದ ಸಂದರ್ಭದಲ್ಲಿ ನಾನು ತೆಗೆದ ಕೆಲವು ಚಿತ್ರಗಳು ನನ್ನ ತುಂಬಾ ನೆಚ್ಚಿನ ಚಿತ್ರಗಳಲ್ಲಿ ಕೆಲವಾಗಿ ಉಳಿದುಬಿಡುತ್ತವೆ. ಇಲ್ಲಿ ಕೆಲವಿವೆ:

ಅರ್ಥವಿಲ್ಲದ ವ್ಯರ್ಥ ಸಾಲುಗಳು – ೧

ಜನವರಿ 20, 2008

ನಮ್ಮ ಹುಡುಗಿ ವಸುಧೆಗೆ
ನಿತ್ಯ ಸಂಕ್ರಾಂತಿ ಹಬ್ಬ
ಏರಿಸಿಳಿಸುತ್ತಾಳೆ ದಿನಕ್ಕೆರಡು
ಒಂದು ಚಿನ್ನ ಇನ್ನೊಂದು ಬೆಳ್ಳಿ
ಬಾಲಂಗೋಚಿಯಿಲ್ಲದ ಗಾಳಿಪಟ

***

ತುಂಟ ಚಂದಿರ
ಮೇಘನೆಯ ಸೆರಗ ಹಿಡಿದು
ಕಣ್ಣಾಮುಚ್ಚಾಲೆಯಾಡುವಾಗ
ನನ್ನ ಮನದನ್ನೆ
ಬಿಚ್ಚೋಲೆ ಗೌರಮ್ಮ-
ಳಾಗಿ ಕೂತು
ಸಾಧಿಸುವುದು
ಸಾಧುವೇ?

***

ಹೀಗೇಕೆ?

ಜನವರಿ 7, 2008

ಕುರುಹಿಲ್ಲದೆ ಹರಿದು
ಕಲ್ಲು ಕುತ್ತಿಗೆಗೆ ಜೋಲು
ಅಕ್ಕರಿಸಿ ತಂದ ಹೊಳಪೀಗ
ಕಣ್ಣು ಕುಕ್ಕಿ,
ಧಿಕ್ಕರಿಸಿ

ಭಾಷೆ ಹಗುರ
ಮಾತು ಭಾರ
ಘನಿಸಿ ಘಟಿಸುವ ಮುನ್ನ
ಎದೆಯ ಸೊರಹಿನ ಸೊನೆ
ಸ್ರವಿಸಿ ಅಪಸ್ವರ
ಆಗಿದ್ದು ಯಾವಾಗ?

ದಾಪುಗಾಲಿನ ನಡುವೆ
ದಾಟಿ ಕಳೆದದ್ದೆಷ್ಟೋ
ಕೂತು ಬೆಳೆಸಿದ ಹೊಡಕೆ
ಬೆಳೆದು ಬಿರಿದದ್ದೆಷ್ಟೋ

ಅಲೆದಲೆದು ಹುಡುಕುವುದೆಷ್ಟು
ಮತ್ತೆ ಜೋಡಿಸಿ ಹೆಣೆಯುವುದೆಷ್ಟು
ಹೊರಲಾರದೆ ಹೊತ್ತು
ಈಗ ಹಗುರತ್ವದ ಭಾರ

ಹೀಗೇಕೆ? ಹೀಗೇ ಏಕೆ?